ಭಾಷೆ
‘ಕನ್ನಡ ಅಧ್ಯಯನಗಳು’ - ಇತಿಹಾಸ

ಒಂದು ಭಾಷೆಯನ್ನು ಬಳಸುತ್ತಿರುವ ಜನರ ಸಮುದಾಯವು, ಆ ಭಾಷೆಯ ಸ್ವರೂಪದ ಬಗ್ಗೆ ಆಲೋಚಿಸುವುದು ಸಹಜ ಮತ್ತು ಅನಿವಾರ್ಯ. ಭಾಷೆಯು ಯಾವಾಗಲೂ ತನ್ನೊಳಗಿನ ಮತ್ತು ಹೊರಗಿನ ಪ್ರಭಾವಗಳನ್ನು ಎದುರಿಸುತ್ತಿರುತ್ತದೆ. ಅದು ಸದಾ ಬದಲಾಗುತ್ತಿರುವ, ಬಹಳ ಸಂಕೀರ್ಣವಾದ ಸಂಗತಿ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳು, ಭಾಷೆಯ ಬಳಕೆಯಲ್ಲಿ ಅನೇಕ ತಲ್ಲಣಗಳನ್ನು ಹುಟ್ಟಿಸುತ್ತವೆ. ಈ ತಲ್ಲಣಗಳು ಬದಲಾವಣೆಗಳ ದಿಕ್ಕನ್ನು ನಿರ್ಧರಿಸಬಲ್ಲವು. ಹಲವು ಹಿನ್ನಲೆಗಳಿಂದ ಬಂದ ಬಲ್ಲಿದರ ಸಮುದಾಯವು, ಇಂತಹ ಸಮಸ್ಯೆಗಳನ್ನು ಕುರಿತು, ಆಮೂಲಾಗ್ರವಾಗಿ ಚರ್ಚಿಸಿದಾಗ ಮಾತ್ರ ಅವು ಬೆಳಕಿಗೆ ಬರುತ್ತವೆ. ಇಲ್ಲದಿದ್ದರೆ, ಯಥಾಸ್ಥಿತಿಯು ಮುಂದುವರಿಯುತ್ತದೆ.

ತನ್ನ ಸುದೀರ್ಘವಾದ ಚರಿತ್ರೆಯಲ್ಲಿ ಕನ್ನಡವೂ ಅನೇಕ ಸವಾಲುಗಳನ್ನು ಎದುರಿಸಿದೆ. ಈ ಸವಾಲುಗಳ ಮತ್ತು ಅದರ ಪರಿಣಾಮಗಳನ್ನು ಕನ್ನಡದ ಸಾಹಿತ್ಯಕೃತಿಗಳು ಮತ್ತು ಜ್ಞಾನಸಂಬಂಧಿಯಾದ ಪುಸ್ತಕಗಳು ದಾಖಲಿಸಿವೆ. ಆದರೆ, ಇನ್ನೆಷ್ಟೋ ಸಲ ಇಂತಹ ಸವಾಲುಗಳು ಯಾರ ಗಮನಕ್ಕೂ ಬಂದಿಲ್ಲ, ದಾಖಲೆಯಾಗಿಲ್ಲ. ಆದರೆ, ನಮ್ಮ ಕವಿಗಳು ಮತ್ತು ವಿದ್ವಾಂಸರು ಮಾಡಿಕೊಂಡಿರುವ ಆಯ್ಕೆಗಳನ್ನು ಗಮನಿಸಿದಾಗ ಈ ಸಂಗತಿಗಳು ತಿಳಿದುಬರುತ್ತವೆ.

ಕವಿರಾಜಮಾರ್ಗವು, ಹತ್ತನೆಯ ಶತಮಾನದಲ್ಲಿ ರಚಿತವಾದ, ಅಲಂಕಾರಶಾಸ್ತ್ರವನ್ನು ಕುರಿತ ಪುಸ್ತಕ. ಕನ್ನಡ ಭಾಷೆಯ ಇತಿಹಾಸದ ಬಹಳ ಮುಖ್ಯವಾದ ಸಂಧಿಕಾಲದಲ್ಲಿ, ಅದು ಎದುರಿಸಬೇಕಾದ ಅನೇಕ ಮುಖ್ಯವಾದ ಸವಾಲುಗಳನ್ನು ಕವಿರಾಜಮಾರ್ಗವು ಎದುರಿಸುತ್ತದೆ. ಅಷ್ಟೇ ಅಲ್ಲ, ಬಹಳ ದಿಟ್ಟವಾದ, ಬಹಳ ಕಾಲದವರೆಗೆ ಉಳಿದುಬಂದ ಪರಿಹಾರಗಳನ್ನೂ ಸೂಚಿಸುತ್ತದೆ. ಈ ಕೃತಿಯ ಲೇಖಕನಾದ ಶ್ರೀವಿಜಯನು, ಪ್ರಮಾಣಭಾಷೆ ಮತ್ತು ಉಪಭಾಷೆಗಳ ನಡುವಿನ ತಿಕ್ಕಾಟವನ್ನು ಗಮನಕ್ಕೆ ತಂದುಕೊಳ್ಳುತ್ತಾನೆ. ಪುಲಿಗೆರೆ, ಕೊಪ್ಪಳ ಮುಂತಾದ ನಾಲ್ಕು ಊರುಗಳಿಂದ ಸುತ್ತುವರಿಯಲ್ಪಟ್ಟ ಭೂಪ್ರದೇಶದಲ್ಲಿ ಬಳಸುವ ಕನ್ನಡವೇ ಕನ್ನಡದ ತಿರುಳ್ ಎಂದು ಅವನು ತೀರ್ಮಾನಿಸುತ್ತಾನೆ. ಹಾಗೆಯೇ ಸಂಸ್ಕೃತದ ವಿಷಯ ಬಂದಾಗ, ಕವಿರಾಜಮಾರ್ಗಕಾರನು, ಅದರಿಂದ ಒಳ್ಳೆಯ ಅಂಶಗಳನ್ನು ತೆಗೆದುಕೊಂಡರೆ ತಪ್ಪಿಲ್ಲವೆಂಬ ನಿಲುವಿನ ಪರವಾಗಿದ್ದಾನೆ. ಅವನು ಶಬ್ದಕೋಶ, ಛಂದೋರೂಪಗಳು, ಅಲಂಕಾರಗಳು ಮುಂತಾದ ನೆಲೆಗಳಲ್ಲಿ, ಸಂಸ್ಕೃತದಿಂದ ಎರವಲು ತೆಗೆದುಕೊಳ್ಳಬಹುದೆಂದು ಹೇಳುತ್ತಾನೆ. ಆದರೆ, ಅವುಗಳ ಜೊತೆಗೆ ಅಚ್ಚ ಕನ್ನಡದ ಸಂಗತಿಗಳನ್ನೂ ಬಳಸಬೇಕೆಂದು ಸೂಚಿಸುತ್ತಾನೆ. ಅವನ ಈ ನಿಲುವನ್ನು ಅನುಸರಣೆ ಮಾಡಿದ್ದರಿಂದ ಕನ್ನಡ ಭಾಷೆ ಮತ್ತು ಸಾಹಿತ್ಯಗಳು ಶ್ರೀಮಂತವಾದವು. ಆದರೆ, ಕನ್ನಡಕ್ಕೆ ಸಹಜವಾಗಿದ್ದ ಅನೇಕ ದ್ರಾವಿಡ ಅಂಶಗಳು ಕ್ರಮೇಣ ಕರಗಿಹೋದವು. ಇದರ ಸಂಗಡವೇ ಕನ್ನಡಭಾಷೆಯ ವ್ಯಾಕರಣ ಮುಂತಾದವನ್ನು ವಿವರಿಸುವಾಗ, ವಿಶ್ಲೇಷಣೆ ಮಾಡುವಾಗ, ಸಂಸ್ಕೃತವು ಒದಗಿಸಿದ ಮಾದರಿಗಳನ್ನು ಕುರುಡಾಗಿ ಬಳಸಿಕೊಳ್ಳುವ ಅಭ್ಯಾಸವೂ ಕಾಣಿಸಿಕೊಂಡಿತು. ಕನ್ನಡವು ಹೀಗೆ ತನ್ನದೇ ಆದ ಲಕ್ಷಣಗಳನ್ನು ಕಳೆದುಕೊಂಡಿದ್ದರಿಂದ ಆದ ಪರಿಣಾಮವು ಅದನ್ನು ತಮಿಳಿನೊಂದಿಗೆ ಹೋಲಿಸಿದಾಗ ಸ್ಪಷ್ಟವಾಗುತ್ತದೆ. ತಮಿಳು ಭಾಷೆಯು ಮೊದಲಿನಿಂದಲೂ ಸಂಸ್ಕೃತವೇ ಇರಲಿ, ಇಂಗ್ಲಿಷ್ ಇರಲಿ ಅಥವಾ ಹಿಂದಿ ಇರಲಿ ಪ್ರತಿಯೊಂದರ ಬಗೆಗೂ ಪ್ರತಿರೋಧವನ್ನು ತೋರಿಸಿದೆ. ತನ್ನತನವನ್ನು ಕಾಪಾಡಿಕೊಂಡಿದೆ.

ಆದರೂ ಭಾಷೆಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ಕವಿಗಳು ಮಾಡಿಕೊಂಡಿರುವ ಆಯ್ಜೆಗಳಿಗೂ ವಿದ್ವಾಂಸರ ಆಯ್ಕೆಗಳಿಗೂ ನಡುವೆ ಪರಸ್ಪರ ವಿರೋಧವನ್ನು ಗುರುತಿಸಬಹುದು. ಸಾಮಾನ್ಯವಾಗಿ, ವಿದ್ವಾಂಸರು ಸಮಕಾಲೀನವಾದ ಸತ್ಯಗಳು ಎದುರಾದಾಗಲೂ ಅವಗಳನ್ನು ನಿರಾಕರಿಸಿ ಸಂಸ್ಕೃತವು ಸೂಚಿಸಿದ ಹಾದಿಗಳನ್ನೇ ಹಿಡಿದಿದ್ದಾರೆ. ಆದರೆ ಅವರಲ್ಲಿ ನಾಗವರ್ಮ. ಕೇಶಿರಾಜರಂತಹ ಕೆಲವರು, ತಮ್ಮ ಕಾಲದಲ್ಲಿ ಧ್ವನಿರಚನೆ ಮತ್ತು ಪದರಚನೆಗಳ ನೆಲೆಯಲ್ಲಿ ನಡೆಯುತ್ತಿದ್ದ ಬದಲಾವಣೆಗಳನ್ನು ಗಮನಿಸ ದಾಖಲಿಸಿದ್ದಾರೆ ಅವರು ಅದಕ್ಕೆ ಒಪ್ಪಿಗೆಯ ಮುದ್ರೆ ಒತ್ತದೆ, ಅವುಗಳನ್ನು ಗ್ರಾಮ್ಯವೆಂದು ನಿರಾಕರಿಸಿರಬಹುದು. ಆದರೆ, ಗಮನಿಸಿರುವುದಂತೂ ನಿಜ. ಆದರೆ ಪಂಪ ಮತ್ತು ನಾಗಚಂದ್ರರಂತಹ ಕವಿಗಳು, ತಮ್ಮ ಕಾಲಕ್ಕೆ ಸರಿಹೊಂದುವಂತಹ ಬರವಣಿಗೆಯ ವಿಧಾನಗಳನ್ನು ರೂಪಿಸಿಕೊಂಡರು. ಹನ್ನೆರಡನೆಯ ಶತಮಾನದ ವಚನಕಾರರಂತೂ, ಪೆಡಸಾದ ಛಂದೋನಿಯಮಗಳು, ಕ್ಲೀಷೆಯಾಗಿದ್ದ ಅಲಂಕಾರಗಳು ಮತ್ತು ಸಂಸ್ಕೃತಮಯವಾಗಿದ್ದ ಶಬ್ದಕೋಶವನ್ನು ಬಿಟ್ಟು ಹೊಸ ಹಾದಿಯನ್ನು ಕಟ್ಟಿಕೊಟ್ಟರು. ಆಂಡಯ್ಯ, ನಯಸೇನ, ಹರಿಹರ, ಪುರಂದರದಾಸ, ಕನಕದಾಸ, ಮುದ್ದಣ ಮತ್ತು ಲಕ್ಷ್ಮೀಶರಂತಹ ಕವಿಗಳು ಕಾವ್ಯಭಾಷೆ ಮತ್ತು ಸಂಸ್ಕೃತ-ಕನ್ನಡಗಳ ಸಂಯೋಜನೆಯ ಬಗ್ಗೆ ತೆಗೆದುಕೊಂಡ ನಿಲುವುಗಳು ಮತ್ತು ಅವನ್ನು ಅಳವಡಿಸಿಕೊಂಡ ರೀತಿಯು ಸಾಹಿತ್ಯದ ವಿದ್ಯಾರ್ಥಿಗಳಿಗೆ ಪರಿಚಿತವಾಗಿಯೇ ಇದೆ.

ಇನ್ನು ಮುಂದೆ, ಇದುವರೆಗೆ ಹೇಳಿದ ವಿಚಾರಗಳ ಹಿನ್ನೆಲೆಯಲ್ಲಿ, ಇಪ್ಪತ್ತನೆಯ ಶತಮಾನದದಲ್ಲಿ ಕನ್ನಡ ಅಧ್ಯಯನವು ತೆಗೆದುಕೊಂಡ ದಿಕ್ಕುಗಳನ್ನು ಪರಿಶೀಲಿಸಲಾಗಿದೆ. ಕನ್ನಡ ನಾಡು-ನುಡಿಗಳ ಪ್ರಾಚೀನತೆ, ಅದು ಚಾರಿತ್ರಿಕವಾಗಿ ಬೆಳೆದುಬಂದಿರುವ ಬಗೆ, ಕನ್ನಡ ಮತ್ತು ಅದರ ಪ್ರಬೇದಗಳಿಗೆ ವರ್ಣಾತ್ಮಕ ವ್ಯಾಕರಣಗಳನ್ನು ರೂಪಿಸುವ ಕೆಲಸ, ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಗಳು, ಕನ್ನಡ-ಸಂಸ್ಕೃತ, ಕನ್ನಡ-ಇಂಗ್ಲಿಷ್, ಕನ್ನಡ ಹಿಂದಿಗಳ ಪರಸ್ಪರ ಮುಖಾಮುಖಿಗೆ ಸಂಬಂಧಿಸಿದ ಸಮಸ್ಯೆಗಳು, ಕನ್ನಡ ಲಿಪಿಯ ಬೆಳವಣಿಗೆ ಮತ್ತು ಆಡಳಿತ, ಶಿಕ್ಷಣ ಹಾಗೂ ನ್ಯಾಯಾಂಗಗಳಲ್ಲಿ ಕನ್ನಡವನ್ನು ಮಾಧ್ಯಮವಾಗಿ ಅಳವಡಿಸುವ ಪ್ರಯತ್ನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಈ ವಿದ್ವಾಂಸರು ಗಂಭೀರವಾಗಿ ಪರಿಗಣಿಸಿ, ವಿವರವಾಗಿ ಚರ್ಚಿಸಿದ್ದಾರೆ.

ಈ ವಿಷಯಗಳನ್ನು ನೋಡಿರುವ ರೀತಿಯಲ್ಲಿ ಪಾರಂಪರಿಕವಾದ ತಿಳಿವಳಿಕೆಯನ್ನು ಪಡೆದಿರುವ/ನಂಬಿರುವ ವಿದ್ವಾಂಸರಿಗೂ ಆಧುನಿಕ ಚಿಂತಕರಿಗೂ ನಡುವೆ, ಧೋರಣೆಗಳಿಗೆ ಸಂಬಂಧಪಟ್ಟ ವ್ಯತ್ಯಾಸಗಳಿವೆ. ಇಲ್ಲಿ ಸಾಂಪ್ರದಾಯಿಕ ವಿದ್ವಾಂಸರೆಂದು ಪರಿಗಣಿಸಿರುವವರಲ್ಲಿ ಅನೇಖರು, ಆಧುನಿಕ ಭಾಷಾಶಾಸ್ತ್ರದ ವಿಧಾನಗಳಲ್ಲಿ ಅತ್ಯುತ್ತಮವಾದ ತರಬೇತಿಯನ್ನು ಪಡೆದಿರುವವರೆನ್ನುವುನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ವಾಸ್ತವವಾಗಿ ಭಾಷಿಕ ಸಮುದಾಯಗಳ ಬಹುತ್ವಕ್ಕೂ ಮತ್ತು ಶಿಷ್ಟ’/’ಪ್ರಮಾಣವೆಂದು ಕರೆಯಲಾಗಿರುವ ಭಾಷೆಯ ಹೇರುವಿಕೆಗೂ ನಡುವೆ ಸಂಘರ್ಷದ ಎಳೆಯೊಂದು ಸದಾ ಉಳಿದುಕೊಂಡಿದೆ. ಸಮಾಜದಲ್ಲಿ ಬಲವಾಗಿ ಬೇರುಬಿಟ್ಟಿರುವ ವರ್ಗ ಮತ್ತು ವರ್ಣಗಳ ಬೆಂಬಲವನ್ನು ಪಡೆದಿರುವ ಶೈಕ್ಷಣಿಕ ವಿಧಾನಗಳಲ್ಲಿ ಗುಣಾತ್ಮಕವಾದ ಬದಲಾವಣೆಗಳನ್ನು ತರುವುದು ಕಷ್ಟದ ಕೆಲಸ. ಒಂದು ಪದಬಳಕೆಯ ಸರಿತನ ಅಥವಾ ತಪ್ಪುತನಗಳು ಅಂತಹ ತಪ್ಪುಗಳಿಗೆ ಕಾರಣವಾಗಿರುವ ಸಾಮಾಜಿಕ-ಆರ್ಥಿಕ ಸಂಗತಿಗಳಿಗಿಂತ ಮುಖ್ಯವಾಗಿಬಿಡುತ್ತವೆ. ಇಂತಹ ಪದಬಳಕೆಗಳಲ್ಲಿ ತಪ್ಪನ್ನು ಹುಡುಕುವ ವ್ಯಾಕರಣ ನಿಯಮಗಳನ್ನು ಪ್ರಾಮಾಣಿಕವಾಗಿ, ನಿರ್ಭಾವುಕವಾಗಿ ನೋಡಿದಾಗ, ಅವು ಸಂಸ್ಕೃತ ವ್ಯಾಕರಣವನ್ನು ಅವಲಂಬಿಸಿವೆಯೆಂಬ ವಿಷಯವು ನಮಗೆ ಗೊತ್ತಾಗಬಹುದು.

ಈ ಶತಮಾನದ ಮೊದಲನೆಯ ಅರ್ಧದಲ್ಲಿ,ಪ್ರಾಚೀನತೆಯ ಪ್ರಶ್ನೆಯು ನಮ್ಮ ಹಿರಿಯರಿಗೆ ಬಹಳ ಮುಖ್ಯವೆನಿಸಿತ್ತು. ಆದರೆ, ಈಗ ಆ ಚರ್ಚೆಯು ಹಿನ್ನೆಲೆಗೆ ಸರಿದಿದೆ. ಹಿಂದಿನವರು ಕೊಟ್ಟ ಸಾಕ್ಷಿಗಳು ಮತ್ತು ತಲುಪಿದ ತೀರ್ಮಾನಗಳನ್ನು ಹೆಚ್ಚು ಚರ್ಚೆಗೆ ಹೋಗದೆ ಒಪ್ಪುತ್ತಿದ್ದಾರೆ. ಆದರೆ, ಇಲ್ಲಿಯೂ ಕೂಡ ಇತರ ಭಾಷೆಯ ಪಠ್ಯಗಳಲ್ಲಿ ಇರಬಹುದಾದ ಕನ್ನಡ-ಕರ್ನಾಟಗಳ ಉಲ್ಲೇಖಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಒಂದು ಭಾಷೆಯು ಯಾವುದೇ ಲಿಖಿತ ಪಠ್ಯಗಳಿಲ್ಲದೆ, ಇತರ ಭಾಷೆಗಳ ಕೃತಿಕಾರರ ಗಮನಕ್ಕೆ ಬರದೆ, ನೂರಾರು ವರ್ಷಗಳವರೆಗೆ ಬೆಳೆದುಬಂದಿರಬಹುದು. ವಾಸ್ತವಾಗಿ ನಾವು ಪೂರ್ವದ್ರಾವಿಡ ಭಾಷೆಯಿಂದ ಪೂರ್ವಕನ್ನಡ ಭಾಷೆಯವರೆಗೆ ನಡೆದಿರುವ ನಿಡಿದಾದ ಪಯಣವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಈ ದಿಕ್ಕಿನಲ್ಲಿ ಡಿ.ಎನ್. ಶಂಕರ ಭಟ್ ಮತ್ತು ಷ. ಶೆಟ್ಟರ್ ಅವರು ಕೆಲವು ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದಾರೆ.

ಅದೇ ರೀತಿಯಲ್ಲಿ ಹಳೆಯ ಸಾಹಿತ್ಯಕ ಪಠ್ಯಗಳು ಮತ್ತು ಶಾಸನಗಳನ್ನು ಅವಲಂಬಿಸಿ ಕಟ್ಟಿಕೊಂಡಿರುವ ಕನ್ನಡ ಭಾಷೆಯ ಚರಿತ್ರೆಗೂ, ಕೆಲವು ಪರಿಮಿತಿಗಳಿರುತ್ತವೆ. ಇದುವರೆಗೆ ಇಂತಹ ಅಧ್ಯಯನಗಳು ಕನ್ನಡದ ಚರಿತ್ರೆಯನ್ನು ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡಗಳೆಂಬ ನಾಲ್ಕು ಹಂತಗಳಾಗಿ ವಿಂಗಡಿಸಿಕೊಂಡಿದೆ. ವಾಸ್ತವವಾಗಿ, ಕವಿಗಳು ಆರಿಸಿಕೊಳ್ಳುವ ಭಾಷಿಕಶೈಲಿಗೂ ಮತ್ತು ಅವರ ಕಾಲದ ಭಾಷಿಕ ಸನ್ನಿವೇಶ ಹಾಗೂ ಉಪಭಾಷೆಗಳಿಗೂ ಅಷ್ಟೊಂದು ನಿಕಟವಾದ ನಕಲು-ಮರುನಕಲು ಸಂಬಂಧವೇನೂ ಇರುವುದಿಲ್ಲ. ಒಂದೇ ಹಂತದಲ್ಲಿ ಹಳಗನ್ನಡ ಮತ್ತು ನಡುಗನ್ನಡಗಳೆರಡರಲ್ಲೂ ಕಾವ್ಯರಚನೆ ಆಗಿರುವುದನ್ನು ಗಮನಿಸಬಹುದು. ಉದಾಹರಣೆಗೂ ಖಂಡಿತವಾಗಿಯೂ ನಡುಗನ್ನಡವೆನ್ನಬಹುದಾದ ಭಾಷೆಯಲ್ಲಿ ಶಿವಶರಣರು ವಚನಗಳನ್ನು ಬರೆದ ಅನಂತರವೂ ಅನೇಕ ಕವಿಗಳು ಹಳೆಯದಕ್ಕೆ ಒಲಿಯುವ ಚಂಪೂ ಮಾರ್ಗದಲ್ಲಿಯೇ ಕಾವ್ಯಗಳನ್ನು ಬರೆದಿದ್ದಾರೆ. ಿದೇ ಮಾತನ್ನು ಭೌಗೋಳಿಕ ಹಾಗೂ ಸಾಮಾಜಿಕ ಉಪಭಾಷೆಗಳಿಗೆ ಸಂಬಂಧಿಸಿದಂತೆಯೂ ಹೇಳಬಹುದು. ನಿಜವಾಗಿ ನೋಡಿದರೆ, ನಾವು ಇಷ್ಟೊಂದು ಆತ್ಮವಿಶ್ವಾಸದಿಂದ ಉಪಯೋಗಿಸುತ್ತಿರುವ ಈ ಆಕರಗಳು, ನಿಜವಾಗಿ ನೋಡಿದರೆ, ಕನ್ನಡದ ಚಾರಿತ್ರಿಕ ವಾಸ್ತವಗಳಿಗೆ ಅಥವಾ ಬಹುರೂಪಿಯಾದ ಉಪಭಾಷಿಕ ವಾಸ್ತವಗಳಿಗೆ ಕನ್ನಡಿ ಹಿಡಿಯುವುದಿಲ್ಲ.

ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದೀ ಭಾಷೆಗಳಿಂದ ದೊರೆತಿರುವ ಶ್ರೀಮಂತವಾದ ಆಕರಗಳನ್ನು ಬಳಸುವುದರ ಬಗ್ಗೆ ನಮ್ಮಲ್ಲಿ ನಿರಂತರವಾದ ಚರ್ಚೆಗಳು ನಡೆದಿವೆ. ಇಲ್ಲಿಯೂ ಸಂಸ್ಕೃತದ ಪರವಾದ ದಿಟ್ಟ ನಿಲುವುಗಳಿವೆ. ಸಂಸ್ಕೃತ ಪದಗಳು ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿವೆಯೆಂಬ ನಿಲುವು ಒಂದು ಕಡೆ ಇದ್ದರೆ, ನಮ್ಮ ಕನ್ನಡ ಬರವಣಿಗೆಯ ನಡುವೆ ಇಂಗ್ಲಿಷ್ ಪದಗಳನ್ನು ಬಳಸುವುದೆಂದರೆ, ಕನ್ನಡದ ಪರಿಶುದ್ಧತೆಯ ಮೇಲೆ ಮಾಡಿದ ಆಕ್ರಮಣವೆಂದೇ ಹೇಳುತ್ತಾರೆ. ಎರವಲು ತೆಗದುಕಂಡ ಪದಗಳನ್ನು ಅವು ಇರುವಂತೆಯೇ ಬಳಸಬೇಕೋ ಅಥವಾ ಅವುಗಳನ್ನು ಕನ್ನಡದ ಒಳನಿಯಮಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳಬೇಕೋ ಎನ್ನುವುದನ್ನು ಕುರಿತಂತೆಯೂ ಅಭಿಪ್ರಾಯಭೇದಗಳಿವೆ. ಎಂದರೆ, ತತ್ಸಮ ಮತ್ತು ತದ್ಭವಗಳಲ್ಲಿ ಯಾವುದರ ಬಳಕೆ ಹೆಚ್ಚು ಸರಿಯೆಂಬ ವಾದ.

ಈಚೆಗೆ, ಕನ್ನಡ ಅಧ್ಯಯನಗಳ ಚೌಕಟ್ಟಿನಲ್ಲಿ ಮತ್ತೆ ಶಿಕ್ಷಣಮಾಧ್ಯಮದ ಪ್ರಶ್ನೆಯು ಬಹಳ ಮುಖ್ಯವೆನಿಸಿದೆ. ಸಹಜವಾಗಿಯೇ ಇದು ಭಾವನೆಗಳನ್ನು ಕೆರಳಿಸುವ ಸಮಗತಿ. ಕನ್ನಡ/ತಾಯಿನುಡಿಗಳಲ್ಲಿ ಶಿಕ್ಷಣ ನಡೆಯಬೇಕೆಂದು ಹೇಳುವವರಿಗೂ ಇಂಗ್ಲಿಷ್ ಮಾಧ್ಯಮದ ಪ್ರತಿಪಾದಕರಿಗೂ ಬಹುಕಾಲದಿಂದ ಬಿಸಿಬಿಸಿ ಮಾತು-ಕತೆಗಳು ನಡೆದುಕೊಂಡು ಬಂದಿವೆ. ರಾಜಕೀಯವಾದ ತೀರ್ಮಾನಗಳು, ವೈಜ್ಞಾನಿಕವಾದ ಮಾಹಿತಿಗಳನ್ನು ಬಳಸಿಕೊಳ್ಳುವ ಸಂಭವ ಕಡಿಮೆ. ಅಂತೆಯೇ ವೈಜ್ಞಾನಿಕವೆನ್ನಲಾದ ಸಂಶೋಧನೆಗಳು ಸಾಮಾಜಿಕ ಸತ್ಯಗಳನ್ನು ಕೆಲವು ಬಾರಿ ಬದಿಗೆ ಸರಿಸುತ್ತವೆ. ಎಷ್ಟೋ ಸಲ ಚಳುವಳಿಗಳಿಂದ ಪ್ರೇರಿತವಾದ ನಿಲುವುಗಳಿಗೂ ಸರ್ಕಾರದ ನೀತಿಗಳಿಗೂ ಪರಸ್ಪರ ವಿರೋಧವಿರುತ್ತದೆ. ಬಹುತ್ವವೇ ಮೂಲನೆಲೆಯಾಗಿರುವ ಸಮಾಜಗಳಲ್ಲಿ ಇಂತಹ ಸಂಕೀರ್ಣ ಸಮಸ್ಯೆಗಳು ಬಿಕ್ಕಟ್ಟುಗಳನ್ನು ಉಂಟುಮಾಡುವುದು ಕೇವಲ ಸಹಜ.

ಕನ್ನಡ ಅಧ್ಯಯನಗಳ ಸಿಂಹಪಾಲು, ಸಾಹಿತ್ಯಕ ವಿಷಯಗಳನ್ನು ಕುರಿತಂತೆ ಇರುತ್ತವೆ. ಇದು ಅಂತಹ ಆರೋಗ್ಯಕರವಾದ ಪರಿಸ್ಥಿತಿಯೇನೂ ಅಲ್ಲ. ಶೈಲಿ, ಛಂದಸ್ಸು, ಅಲಂಕಾರಗಳು ಮತ್ತು ಸಾಹಿತ್ಯದಲ್ಲಿ ಉಪಭಾಷೆಗಳ ಬಳಕೆಗೆ ಸಂಬಂಧಪಟ್ಟಂತೆ, ಅವು ಸಾವು-ಬದುಕಿನ ಪ್ರಶ್ನೆಗಳೇನೋ ಎನ್ನುವಂತೆ ಚರ್ಚೆಗಳ ನಡೆಯುತ್ತವೆ. ಭಾಷಾನೀತಿ, ಭಾಷಾಯೋಜನೆ ಮುಂತಾದ ಮುಖ್ಯವಾದ ವಿಡಯಗಳನ್ನು ಕುರಿತ ಚರ್ಚೆಯು ಹಿನ್ನೆಲೆಗೆ ಸರಿಯುತ್ತದೆ. ದುರದೃಷ್ಟವಶಾತ್ ಅಥವಾ ಉದ್ದೇಶಪೂರ್ವಕವಾಗಿ, ಕೆಲವು ವಿದ್ವಾಂಸರು ನಡೆಸುತ್ತಿರುವ ಗಂಭೀರವಾದ ಅಧ್ಯಯನಗಳಿಗೂ ರಾಜ್ಯದ ಶೈಕ್ಷಣಿಕ ಸನ್ನಿವೇಶಕ್ಕೂ ನಡುವೆ ಬಹು ದೊಡ್ಡ ಬಿರುಕು ತಲೆದೋರಿದೆ. ಕನ್ನಡವನ್ನು ಭಾಷೆಯಾಗಿ ಮತ್ತು ಸಾಂಸ್ಕೃತಿಕ ಸಂಗತಿಯಾಗಿ ಗ್ರಹಿಸಿ, ಚರ್ಚಿಸಿರುವ ಕೆಲವು ಪುಸ್ತಕಗಳ ಪಟ್ಟಿಯನ್ನು ಈ ಕಳಗೆ ಕೊಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ನಿರ್ದಿಷ್ಟ ನಮೂದುಗಳನ್ನು ನೋಡಿದರೆ, ಇನ್ನಷ್ಟು ಮಾಹಿತಿ ಮತ್ತು ಆಕರಗಳು ದೊರೆಯುತ್ತವೆ.

ಮುಂದಿನ ಓದು ಮತ್ತು ಲಿಂಕುಗಳು:

    1. ಕನ್ನಡ ಕೈಪಿಡಿ, ಸಂ. ಬಿ.ಎಂ.ಶ್ರೀಕಂಠಯ್ಯ ಮತ್ತು ಟಿ.ಎಸ್. ವೆಂಕಣ್ಣಯ್ಯ, 1936, ಕನ್ನಡ ಸಾಹಿತ್ಯಪರಿಷತ್ತು, ಬೆಂಗಳೂರು.
    2. ಕಣ್ಮರೆಯಾದ ಕನ್ನಡ, ಶಂ.ಬಾ. ಜೋಷಿ, 1933, ಧಾರವಾಡ.
    3. ಕನ್ನಡದ ನೆಲೆ, ಶಂ.ಬಾ ಜೋಷಿ, 1939, ಧಾರವಾಡ
    4. ಕನ್ನಡ ಮಧ್ಯಮ ವ್ಯಾಕರಣ, ತೀ.ನಂ. ಶ್ರೀಕಂಠಯ್ಯ, 1939, ಮೈಸೂರು
    5. ಕನ್ನಡ ಭಾಷೆಯ ಚರಿತ್ರೆ, ಪ್ರ.ಗೋ. ಕುಲಕರ್ಣಿ, 1957.
    6. ಕನ್ನುಡಿಯ ಹುಟ್ಟು;, ಶಂ.ಬಾ. ಜೋಷಿ
    7. ಕನ್ನಡ ಭಾಷೆಯ ಕಲ್ಪಿತಚರಿತ್ರೆ’, ಡಿ.ಎನ್. ಶಂಕರ ಭಟ್, 1995, ಕನ್ನಡ ವಿಶ್ವವಿದ್ಯಾಲಯ, ಹಂಪಿ.
    8. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ಡಿ.ಎನ್. ಶಂಕರ ಭಟ್, 2000, ಭಾಷಾ ಪ್ರಕಾಶನ, ಮೈಸೂರು.
    9. ಕನ್ನಡ ಜಗತ್ತು-ಅರ್ಧ ಶತಮಾನ, ಕೆ.ವಿ. ನಾರಾಯಣ, 2007, ಕನ್ನಡ ವಿಶ್ವಿದ್ಯಾಲಯ, ಹಂಪಿ.
    10. ವ್ಯಾಕರಣಶಾಸ್ತ್ರದ ಪರಿವಾರ, ಎನ್. ರಂಗನಾಥಶರ್ಮ, 2002, ರಾಷ್ಟ್ರಕವಿ ಗೋವಿಂದಪೈ ಸಂಶೋಧನಕೇಂದ್ರ, ಉಡುಪಿ.
    11. ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು, ಕೆ.ವಿ.ಸುಬ್ಬಣ್ಣ, 2000, ಅಕ್ಷರ ಪ್ರಕಾಶನ, ಹೆಗ್ಗೋಡು.
    12. ಸಂಗಂ ತಮಿಳಗಂ ಕನ್ನಡ ನಾಡು ನುಡಿ, ಷ.ಶೆಟ್ಟರ್, 2007, ಅಭಿನವ, ಬೆಂಗಳೂರು.
    13. ‘Structure of Kannada’ by R.C. Hirematha, 1961, Karnataka University, Dharwar.
    14. ‘Kannada: Descriptive Grammar’ by S.N.Sridhar, 1990, Routledge.
    15. ‘A Generative Grammar of Kannada’, A.K. Ramanujan, 1962, Indiana University.
    16. ‘A Bibliography of Karnataka Studies’, vol. 1, edited by T.V.Venkatachala Shastry, 1972, Mysore.
    17. A Bibliography of Karnataka Studies’, vol. 2, edited by T.V.Venkatachala Shastry’, 1998, Mysore.

ಮುಖಪುಟ / ಭಾಷೆ